ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದ್ದು ಬಿಜೆಪಿ ವಿರುದ್ಧ ಸ್ಪರ್ಧಿಸಲು ಅಭ್ಯರ್ಥಿ ಯಾರಾಗಬೇಕು ಎನ್ನುವ ಚರ್ಚೆಗಳು ಶುರುವಾಗಿವೆ. ಈ ಬಗ್ಗೆ ಚರ್ಚೆ ನಡೆಸಲು ಬಿಜೆಪಿಯೇತರ ಪಕ್ಷಗಳ ನಾಯಕರು ದೆಹಲಿಯಲ್ಲಿ ಇಂದು ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸೋನಿಯಾ ಗಾಂಧಿ, ಶರದ್ ಪವಾರ್, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್, ಸೀತಾರಾಂ ಯೆಚೂರಿ ಸೇರಿದಂತೆ ದೇಶದ 22 ಪ್ರಾದೇಶಿಕ ಪಕ್ಷಗಳಿಗೆ ಪತ್ರ ಬರೆದು ಇಂದಿನ ಸಭೆಯಲ್ಲಿ ಭಾಗಿಯಾಗಲು ಮಮತಾ ಮನವಿ ಮಾಡಿದ್ದಾರೆ. ಎಸ್‍ಪಿಯ ಅಖಿಲೇಶ್ ಯಾದವ್, ಜೆಎಂಎಂ ಅಧ್ಯಕ್ಷ- ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್, ಶಿವಸೇನೆಯ ಸುಭಾಷ್ ದೇಸಾಯಿ, ಡಿಎಂಕೆ ನಾಯಕ ತಾರ್ ಬಾಲು, ಆರ್‍ಎಲ್‍ಡಿಯ ಜಯಂತ್ ಚೌಧರಿ, ಜೆಕೆಪಿಡಿಪಿಯ ಮೆಹಬೂಬಾ ಮುಫ್ತಿ ಭಾಗಿಯಾಗ್ತಿದ್ದಾರೆ. ಜೆಡಿಎಸ್‍ಗೂ ಆಹ್ವಾನ ಬಂದಿದ್ದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಬದಲಾಗಿ ಮಾಜಿ ಸಿಎಂ ಕುಮಾರಸ್ವಾಮಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನಿನ್ನೆ ಶರದ್ ಪವಾರ್ ಭೇಟಿಯಾಗಿದ್ದ ಮಮತಾ ಬ್ಯಾನರ್ಜಿ ರಾಷ್ಟ್ರಪತಿ ಅಭ್ಯರ್ಥಿಯಾಗಲು ಮನವಿ ಮಾಡಿದರು. ಆದರೆ ಪವಾರ್ ಈ ಮನವಿ ತಿರಸ್ಕರಿಸಿದ್ದು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ವಿಪಕ್ಷಗಳಿಂದ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಯಾರಗಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.
#publictv #newscafe #hrranganath